ಗ್ಲಾಸ್ಟರ್ -
	ಈ ಹೆಸರಿನ ನಗರಗಳು ಮೂರಿವೆ. ಮೊದಲನೆಯದು, ಇಂಗ್ಲೆಂಡಿನಲ್ಲಿ ಗ್ಲಾಸ್ಟರ್‍ಪೈರಿನ ಕೌಂಟಿ ಪಟ್ಟಣ. ಇದು ಪಶ್ಚಿಮ ಇಂಗ್ಲೆಂಡಿನಲ್ಲಿದೆ. ಕೈಗಾರಿಕಾ ಕೇಂದ್ರ, ವಿಮಾನ, ವ್ಯವಸಾಯೋಪಕರಣ, ರೈಲ್ವೆ ಸಾಧನಸಾಮಗ್ರಿಗಳು, ಪೀಠೋಪಕರಣ, ಬೆಂಕಿಕಡ್ಡಿ, ಚಲನಚಿತ್ರ ಕ್ಯಾಮೆರ ಮುಂತಾದವು ತಯಾರಾಗುತ್ತವೆ. ಮರ ಕೊಯ್ಯುವುದು ಒಂದು ಹಳೆಯ ಉದ್ಯಮ. ರೋಮನ್ ಆಕ್ರಮಣಕಾಲದಲ್ಲಿ ಗ್ಲಾಸ್ಟರ್ ಒಂದು ಪುರವಾಗಿತ್ತು. ಇದರ ಸನ್ನಿವೇಶದಿಂದಾಗಿ, ಇಲ್ಲಿ ಸ್ಥಾಪಿತವಾದ ಸೇಂಟ್ ಪೀಟರ್ ಅಬೆಯಿಂದಾಗಿ ಇದು ಬೆಳೆಯಿತು. ಇದು ಪ್ರಾಚೀನ ಆಂಗ್ಲಿಯನ್ ರಾಜ್ಯವಾದ ಮರ್ಷಿಯದ ರಾಜಧಾನಿಯಾಯಿತು. 1ನೆಯ ಜೇಮ್ಸ್ ದೊರೆ ಇದಕ್ಕೆ ನಗರದ ಸ್ಥಾನ ನೀಡಿದ(1605). 1885ರವರೆಗೂ ಈ ನಗರದಿಂದ ಪಾರ್ಲಿಮೆಂಟಿಗೆ ಇಬ್ಬರು ಆಯ್ಕೆಯಾಗುತ್ತಿದ್ದರು. ಈಗ ಒಬ್ಬನ ಆಯ್ಕೆಯಾಗುತ್ತದೆ. ಗ್ಲಾಸ್ಟರಿನ ಜನಸಂಖ್ಯೆ 90.134(1971).

	ಅಮೆರಿಕ ಸಂಯುಕ್ತಸಂಸ್ಥಾನಗಳ ಮ್ಯಾಸಚೂಸೆಟ್ಸ್ ರಾಜ್ಯದ ಈಶಾನ್ಯ ಭಾಗದಲ್ಲಿ ಈ ಹೆಸರಿನ ಒಂದು ನಗರವಿದೆ. ಜನಸಂಖ್ಯೆ 21.789(1961). 1642ರಲ್ಲಿ ಇದು ಒಂದು ಸಣ್ಣ ಊರಾಗಿತ್ತು. ಸ್ಕೂನರ್ ಎಂಬ ಹಡಗನ್ನು ಮೊದಲು ಕಟ್ಟಿದ್ದು ಇಲ್ಲಿ ಎಂದು ಹೇಳಲಾಗಿದೆ. ಸಮುದ್ರದಲ್ಲಿ ಕಳೆದುಹೋದ ಮೀನುಗಾರರ ಸ್ಮಾರಕವಾಗಿ ಇಲ್ಲಿ ಬೆಸ್ತನ ಕಂಚಿನ ಪ್ರತಿಮೆಯೊಂದನ್ನು ಸ್ಥಾಪಿಸಿದೆ. 19ನೆಯ ಶತಮಾನದ ಕೊನೆಯ ವೇಳೆಗೆ ಇದು ಬೇಸಗೆಯ ವಿಹಾರಕೇಂದ್ರವಾಗಿಯೂ ಕಲಾವಿದರ ಕೇಂದ್ರವಾಗಿಯೂ ಅಭಿವೃದ್ಧಿಯಾಯಿತು. ಇಲ್ಲಿ ಸಾಹಿತಿಗಳಿಗೂ ಕಲಾವಿದರಿಗೂ ಅನುಕೂಲಕರವಾದ ವಾತಾವರಣವಿದೆ. ಇಲ್ಲಿರುವ ಹ್ಯಾಮಂಡ್ ವಸ್ತು ಸಂಗ್ರಹಾಲಯದಲ್ಲಿ ಅನೇಕ ಒಳ್ಳೆಯ ಕಲಾಕೃತಿಗಳಿವೆ. ಅನೇಕ ಲೇಖಕರ ಕೃತಿಗಳಲ್ಲಿ ಗ್ಲಾಸ್ಟರಿನ ವರ್ಣನೆಯಿದೆ.

	ಅಮೆರಿಕ ಸಂಯುಕ್ತಸಂಸ್ಥಾನಗಳ ನ್ಯೂ ಜರ್ಸಿ ರಾಜ್ಯದ ನೈಋತ್ಯ ಭಾಗದಲ್ಲಿರುವ ಗ್ಲಾಸ್ಟರ್ ನಗರದ ಜನಸಂಖ್ಯೆ 15.511(1961). ಇದು ಡೆಲಾವೇರ್ ನದಿಯ ದಡದಲ್ಲಿದೆ. ಇಲ್ಲಿ 1623ರಲ್ಲಿ ವಸತಿ ಆರಂಭವಾಯಿತು. ಡಚ್ ನೆಲಸುಗಾರರಿಂದ ಇಂಗ್ಲಿಷರು ಇದನ್ನು 1664ರಲ್ಲಿ ವಶಪಡಿಸಿಕೊಂಡರು. ಇದರ ಬಳಿ 1899ರಲ್ಲಿ ಹಡಗು ನಿರ್ಮಾಣ ಉದ್ಯಮ ಆರಂಭವಾಯಿತು. 20ನೆಯ ಶತಮಾನದಲ್ಲಿ ಇದು ಕೈಗಾರಿಕಾಕೇಂದ್ರವಾಗಿ ಬೆಳೆಯಿತು. ಕಟ್ಟಡನಿರ್ಮಾಣ ಸಾಮಗ್ರಿ ಮತ್ತು ರಟ್ಟಿನ ಪೆಟ್ಟಿಗೆಗಳು, ಕಾರ್ಕ್ ಸರಕು, ಮಕ್ಕಳ ಉಡುಪು ಮತ್ತು ರಾಸಾಯನಿಕ ವಸ್ತುಗಳು ಇಲ್ಲಿ ತಯಾರಾಗುತ್ತವೆ.
(ಎಸ್.ಎನ್.ಎಲ್.)
(ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ